
ಸಂಪೂರ್ಣ ಸುದ್ದಿ (ವಿಸ್ತೃತ ವರದಿ):
ಇಂಡಿ ಪಟ್ಟಣದ ಮಹಾವೀರ ವೃತ್ತದಲ್ಲಿ ಇರುವ ಅಂಜುಮನ್ ಇಸ್ಲಾಂ ಕಮಿಟಿಯ ಕಾಂಪ್ಲೆಕ್ಸಿನಲ್ಲಿ ನಡೆಯುತ್ತಿರುವ ಅನಧಿಕೃತ ಕಟ್ಟಡ ಕಾಮಗಾರಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಇಂಡಿ ತಹಶೀಲ್ದಾರ್ ಮತ್ತು ಪುರಸಭೆಯು ಈ ಕಾರ್ಯವನ್ನು ತಕ್ಷಣ ನಿಲ್ಲಿಸಲು ನೋಟಿಸ್ ಜಾರಿಗೊಳಿಸಿದ್ದರೂ, ಸಂಬಂಧಿತ ಅಂಜುಮನ್ ಸಮಿತಿಯವರು ಈ ನೋಟಿಸ್‌ಗಳನ್ನು ಕಡೆಗಣಿಸಿ ತಮ್ಮ ಇಚ್ಛೆಯಂತೆ ಕಾಮಗಾರಿಯನ್ನು ಮುಂದುವರೆಸುತ್ತಿದ್ದಾರೆ.ಸ್ಥಳೀಯ ನಿವಾಸಿ ಸಗೀರ ಮುಲ್ಲಾ ಈ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂಡಿ ಪುರಸಭೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ಮತ್ತು ಅಸಮಾಧಾನವೂ ವ್ಯಕ್ತವಾಗಿದೆ.ಇನ್ನು ಎರಡು ತಿಂಗಳು ಹಿಂದೆಲೇ ಅಂಜುಮನ್ ಕಮಿಟಿಯ ಅವಧಿ ಮುಗಿದರೂ, ನೂತನ ಸಮಿತಿಯ ಚುನಾವಣೆಯನ್ನು ಇಂದಿನವರೆಗೂ ಹಮ್ಮಿಕೊಳ್ಳಲಾಗಿಲ್ಲ. ಆದ್ದರಿಂದ ಈ ಅವಧಿ ಮುಗಿದ ಸಮಿತಿಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿಲ್ಲ.
ಇದರಲ್ಲಿ ಕೂಡಲೆ ಕ್ರಮವಹಿಸದಿದ್ದರೆ, ಅಂಜುಮನ್ ಸಂಸ್ಥೆಯ ಮೌಲ್ಯವಂತ ಆದಾಯದ ಆಸ್ತಿಗೆ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿದೆ.ಮತ್ತೊಂದೆಡೆ, ಸಮಿತಿಯ ಕೆಲವು ಸದಸ್ಯರು ಪಟ್ಟಣದ ಕೆಲವು ವ್ಯಕ್ತಿಗಳಿಂದ ಹಣ ಪಡೆದು, ಪುರಸಭೆ ಅನುಮತಿ ಇಲ್ಲದೆ ಅಂಗಡಿಗಳನ್ನು ನಿರ್ಮಿಸುತ್ತಿದ್ದಾರೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಮುಂದೆ ಅಂಜುಮನ್ ಸಂಸ್ಥೆಯನ್ನೇ ಸಂಕಷ್ಟಕ್ಕೆ ತಳ್ಳುವಂತ ಪರಿಸ್ಥಿತಿಯನ್ನು ಹುಟ್ಟುಹಾಕಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಸ್ಥಳೀಯರು ಹಾಗೂ ಸಂಘಟನೆಗಳ ಆಗ್ರಹವಿದೆ: ವಕ್ಫ್ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಸ್ಥಿಕೆ ವಹಿಸಿ, ಇಂಡಿ ಅಂಜುಮನ್ ಇಸ್ಲಾಂ ಕಮಿಟಿಯ ನೂತನ ಚುನಾವಣೆಯನ್ನು ಘೋಷಿಸಬೇಕು. ಕಾನೂನುಬದ್ಧವಾಗಿ ಹೊಸ ಸಮಿತಿಯನ್ನು ರಚನೆ ಮಾಡುವ ಮೂಲಕ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿ ನಡೆಯುವಂತಾಗಬೇಕು ಎಂಬುದು ಸಾರ್ವಜನಿಕರ ಬಹುಮತದ ನಿರೀಕ್ಷೆಯಾಗಿದೆ.









