
ವಿಜಯಪುರ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯಿಂದ ಬೆಳೆ ಹಾಗೂ ಆಸ್ತಿ-ಪಾಸ್ತಿಗಳಿಗೆ ಭಾರೀ ಹಾನಿ ಸಂಭವಿಸಿದೆ. ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಹಾಗೂ ಗದಗ ಸೇರಿದಂತೆ 8 ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ದಾಖಲಾಗಿದೆ.ಪ್ರಾಥಮಿಕ ಅಂದಾಜು ಪ್ರಕಾರ, ರಾಜ್ಯದ ಸುಮಾರು 9.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಇದರಲ್ಲಿ 8.88 ಲಕ್ಷ ಹೆಕ್ಟೇರ್ ಕೃಷಿಭೂಮಿ ಸೇರಿದೆ. ವಿಶೇಷವಾಗಿ ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ 117 ಗ್ರಾಮಗಳು ಪ್ರವಾಹದಿಂದ ಹಾನಿಗೀಡಾಗಿದ್ದು, ಈ ಜಿಲ್ಲೆಗಳಲ್ಲಿ 80 ಕಾಳಜಿ ಕೇಂದ್ರಗಳು ಸ್ಥಾಪನೆಗೊಂಡಿವೆ. ಇದರಿಂದಾಗಿ 10 ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮುಂಗಾರು ಮಳೆಯಿಂದ ರಾಜ್ಯಾದ್ಯಂತ 52 ಜನರು ಪ್ರಾಣ ಕಳೆದುಕೊಂಡಿದ್ದು, ಕೇವಲ ಯಾದಗಿರಿ ಜಿಲ್ಲೆಯಲ್ಲೇ 245 ಜಾನುವಾರುಗಳು ಸಾವಿಗೀಡಾಗಿವೆ. ಒಟ್ಟಾರೆಯಾಗಿ 422 ಜಾನುವಾರುಗಳು ಮೃತಪಟ್ಟು, 547 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಹಾನಿಗೊಳಗಾದ ಮನೆಗಳ ಪರಿಹಾರಕ್ಕಾಗಿ ಸರ್ಕಾರವು 23 ಕೋಟಿ ರೂಪಾಯಿ ನೆರವು ಬಿಡುಗಡೆ ಮಾಡಿದೆ ಎಂದು ಅವರು ಘೋಷಿಸಿದರು.










