
ವಿಜಯಪುರ: ವಿಜಯಪುರ ನಗರದ ಬಾರ್ ಒಂದರಲ್ಲಿ ನಡೆದ ದುರ್ಘಟನೆಯಲ್ಲಿ ವ್ಯಕ್ತಿಯೊಬ್ಬರು ನೀರಿನ ಬದಲು ಆ್ಯಸಿಡ್ ಕುಡಿದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ನಿನ್ನೆ ನಡೆದ ಈ ಘಟನೆಗೆ ಮಹಮ್ಮದ್ ಶಫೀಕ್ ಮನಿಯರ್ (48) ಎಂಬವರು ಬಲಿಯಾದಿದ್ದಾರೆ. ಅವರು ಮದ್ಯಪಾನ ಮಾಡುವ ವೇಳೆ ತಪ್ಪಾಗಿ ನೀರಿನ ಬದಲಿಗೆ ಆ್ಯಸಿಡ್ ಸೇವಿಸಿದ್ದು, ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಘಟನೆ ವಿಜಯಪುರದ ಗಾಂಧಿ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.










