
ವಿಜಯಪುರ : ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದರು ಇದೆ ವೇಳೆ ವೇದಿಕೆ ಮೇಲೆ ಮುಸ್ಲಿಂ ಧರ್ಮಗುರು ತನ್ವೀರ್ ಹಾಶ್ಮಿಗೆ ಭಯೋತ್ಪಾದಕರ ನಂಟಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗಂಭೀರವಾಗಿ ಆರೋಪಿಸಿದ್ದರು.ಇದೀಗ ಇವರ ಆರೋಪಕ್ಕೆ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.ಮುಸ್ಲಿಂ ಧರ್ಮ ಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಶ್ಮಿ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪಗಳ ಕುರಿತು ಕಿಡಿ ಕಾರಿರುವ ಸಚಿವ ಎಂ. ಬಿ. ಪಾಟೀಲ್, ತಾಕತ್ತಿದ್ದರೆ ಯತ್ನಾಳ್ ಅವರು ಈ ಕುರಿತು ಎನ್‌ಐಎ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.ನಾವು ಎಲ್ಲರನ್ನೂ ಸರಿ ಸಮಾನವಾಗಿ ಕಾಣುತ್ತೇವೆ.

ಯತ್ನಾಳ್ ಮತ್ತು ನಾವು ಹುಟ್ಟಿದ್ದು ಬಸವ ನಾಡಿನಲ್ಲಿ. ಬಸವಣ್ಣ ಸಮಾನತೆ ಸಾರಿದ ನಾಡಲ್ಲಿ ಹುಟ್ಟಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲೂ ಮುಸ್ಲಿಮರು ಭಾಗಿಯಾಗಿದ್ದರು. ದೇಶದಲ್ಲಿ ಅವರಿಗೂ ಹಕ್ಕಿದೆ. ಬಸವ ತತ್ವ ಇದನ್ನೇ ಹೇಳಿದೆ. ಹುಬ್ಬಳ್ಳಿ ಧಾರ್ಮಿಕ ಕಾರ್ಯಕ್ರಮ ವಿಚಾರದ ಬಗ್ಗೆ ಯತ್ನಾಳ್ ಮಾತನಾಡಿದ್ದಾರೆ. ಆ ಕಾರ್ಯಕ್ರಮಕ್ಕೆ ಹೋಗಿದ್ದ ಸಿಎಂ ಮತ್ತು ತನ್ವೀರ್ ಪೀರಾ ವಿರುದ್ಧ ಆರೋಪ ಮಾಡಿದ್ದಾರೆ. ತನ್ವೀರ್ ಪೀರಾ ಅವರ ವಿರುದ್ಧ ಐಸಿಸ್ ಸಂಪರ್ಕ ಹೊಂದಿರುವ ಆರೋಪ ಮಾಡಿ ಪೋಟೋ ಹಾಕಿ ಹೇಳಿಕೆ ನೀಡಿದ್ದಾರೆ.ಯತ್ನಾಳ್ ಅವರು ಮುಸ್ಲಿಮರ ಮತ್ತು ಇಸ್ಲಾಂ ಧರ್ಮದ ದ್ವೇಷ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಟೆರೆರಿಸ್ಟ್ ಜೊತೆ ಧರ್ಮ ಗುರುಗಳ ಸಂಪರ್ಕ ಇದ್ದರೆ ಕೇಂದ್ರದಲ್ಲಿ ಇರುವ ಅವರ ಸರಕಾರದಿಂದ ತನಿಖೆ ಮಾಡಿಸಲಿ. ಸತ್ಯಾಂಶ ಹೊರ ಬರಲಿ.

ಸುಳ್ಳೆಂದು ಸಾಬೀತಾದರೆ ಯತ್ನಾಳ್ ಏನ್ ಮಾಡುತ್ತಾರೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.ಅವರಿಗೆ ದೇಶ ಬಿಟ್ಟು ತೊಲಗಿ ಎಂದು ಹೇಳುವುದಿಲ್ಲ. ಏನು ಮಾಡುತ್ತಾರೆ ಎಂಬುದನ್ನು ಯತ್ನಾಳ್ ಅವರೇ ಹೇಳಲಿ.ಐಸಿಸ್ ಜೊತೆ ಸಂಪರ್ಕವಿದ್ದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಈಗಾಗಲೇ ತನ್ವೀರ್ ಪೀರಾ ಹೇಳಿದ್ದಾರೆ. ತನ್ವೀರ್ ವಿರುದ್ಧ ಆರೋಪ ಸಾಬೀತಾಗದಿದ್ದರೆ ಯತ್ನಾಳ್ ಏನು ಮಾಡುತ್ತಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸಚಿವರು ಸವಾಲು ಹಾಕಿದರು.ಡಿಸಿಎಂ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕು ಎಂದು ನೊಣವಿನಕೆರೆ ಸ್ವಾಮೀಜಿ ನೀಡಿರುವ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ. ಬಿ. ಪಾಟೀಲ್, ಸಿಎಂ ಆಗುವಂಥ ವಿಚಾರಗಳು ನಮ್ಮ ಕಾಂಗ್ರೆಸ್ ಪಕ್ಷದ ವರಿಷ್ಠರ ಕೈಯ್ಯಲ್ಲಿರುತ್ತದೆ. ಕಾಂಗ್ರೆಸ್ ಹೈಕಮಾಂಡ್ ಇದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇದ್ದಾರೆ. ಅವರೆಲ್ಲ ಪರಿಶೀಲನೆ ಮಾಡಿ ಶಾಸಕರ ಅಭಿಪ್ರಾಯ ಪಡೆದು ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ. ಈಗ ಮುಖ್ಯಮಂತ್ರಿಗಳ ಕುರ್ಚಿ ಖಾಲಿ ಇಲ್ಲ. ಹೀಗಾಗಿ ಆ ಪ್ರಶ್ನೆ ಈಗ ಉದ್ಭವಿಸುವುದಿಲ್ಲ ಎಂದು ಎಂ. ಬಿ. ಪಾಟೀಲ್ ಸ್ಪಷ್ಟಪಡಿಸಿದರು.









