
ಸಿಂದಗಿ ಪಟ್ಟಣದಲ್ಲಿ ಬೈಕ್‌ಗಳಿಗೆ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಅಳವಡಿಸಿ, ಸ್ಟೈಲಿಷ್ ಲುಕ್‌ನಲ್ಲಿ ಗಡ್ಡ–ಕೂದಲು ಬಿಟ್ಟುಕೊಂಡು ಶಾಲೆ–ಕಾಲೇಜುಗಳ ಸುತ್ತಮುತ್ತ ತಿರುಗಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿರುವ ಯುವಕರಿಗೆ ಸಿಂದಗಿ ಪೊಲೀಸ್ ಠಾಣಾಧಿಕಾರಿ PSI ಶ್ರೀಕಾಂತ್ ಕಾಂಬಳೆ ಕಠಿಣ ಎಚ್ಚರಿಕೆ ನೀಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಶಾಲೆ ಮತ್ತು ಕಾಲೇಜುಗಳ ಬಳಿ ಕೆಲವು ಯುವಕರು ಬೈಕ್‌ಗಳಲ್ಲಿ ಜೋರಾಗಿ ಸೌಂಡ್ ಮಾಡುತ್ತಾ ವಿದ್ಯಾರ್ಥಿನಿಯರಿಗೆ ಅಸೌಕರ್ಯ ಉಂಟುಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ಸಿಂದಗಿ ಠಾಣೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿದ PSI ಶ್ರೀಕಾಂತ್ ಕಾಂಬಳೆ, “ಇನ್ನು ಮುಂದೆ ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕರ್ಕಶ ಸೌಂಡ್ ಇರುವ ಸೈಲೆನ್ಸರ್ ಬಳಕೆ ಮಾಡಿದರೆ ವಾಹನ ಜಪ್ತಿ ಮಾಡುವುದರ ಜೊತೆಗೆ ಪ್ರಕರಣ ದಾಖಲಿಸಲಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.

ಅದೇ ವೇಳೆ, ಪೊಲೀಸರು ಶ್ವಿಲ್ ಡ್ರೆಸ್‌ನಲ್ಲಿ ಮಪ್ತಿನಲ್ಲಿ ಕಾರ್ಯಾಚರಣೆ ನಡೆಸಲಿದ್ದು, ರೋಡ್ ರೋಮಿಯೋಗಳ ವಿರುದ್ಧ ದಿಡೀರ್ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಶಾಂತಿ–ಸುವ್ಯವಸ್ಥೆಗೆ ಧಕ್ಕೆಯುಂಟುಮಾಡುವ ಯಾವುದೇ ಕೃತ್ಯ ಸಹಿಸಿಕೊಳ್ಳಲಾಗುವುದಿಲ್ಲ ಎಂಬುದು ಪೊಲೀಸರ ಸ್ಪಷ್ಟ ಸಂದೇಶವಾಗಿದೆ.ಸಿಂದಗಿ ಠಾಣೆ ಪೊಲೀಸ್ ತಂಡ ಈಗಾಗಲೇ ಕೆಲವರನ್ನು ತಪಾಸಣೆ ನಡೆಸಿ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಡ್ರೈವ್ ಹಮ್ಮಿಕೊಳ್ಳಲಾಗುವುದು ಎಂದು ತಿಳಿದುಬಂದಿದೆ.ಸಾರ್ವಜನಿಕರು ಹಾಗೂ ಪೋಷಕರು ಕೂಡ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
– I Today News, Sindagi









